ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾನವ ಜೀವನ ಅರ್ಥಪೂರ್ಣ - ವಂ|ಲಾರೆನ್ಸ್

ಪುತ್ತೂರು , ಜೂ.3, 2021  : ಹೇಗೆ ದೀಪವು ಜಗತ್ತಿಗೆ ಬೆಳಕು ನೀಡುತ್ತದೆಯೋ ಹಾಗೆಯೇ ಮಾನವ ಕೂಡ ಸಮಾಜದಲ್ಲಿನ ಅಶಕ್ತರಿಗೆ ನೆರವು ನೀಡುವುದು ಅತ್ಯಾವಶ್ಯಕವಾಗಿದೆ. ಆದ್ದರಿಂದ ಪರರ ಸೇವೆಯಲ್ಲಿ ಮಾನವರಾದ ನಾವೆಲ್ಲಾ ನಿಷ್ಕಲಂಕವಾಗಿ ತೊಡಗಿಸಿಕೊಂಡಾಗ ಮಾನವ ಜೀವನ ಅರ್ಥಪೂರ್ಣವೆನಿಸಬಲ್ಲುದು ಎಂದು ಮಾಯಿದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‍ರವರು ಹೇಳಿದರು. ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ ಬರುವ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಪುತ್ತೂರು, ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗಿತ್ವದಲ್ಲಿ ಜೂ.3 ರಂದು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ ಜರಗಿದ `ಸ್ವಯಂಪ್ರೇರಿತ ರಕ್ತದಾನ ಶಿಬಿರ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಎಂಬುದು ಶ್ರೇಷ್ಟ ದಾನ. ರಕ್ತವನ್ನು ಯಾವುದೇ ರೀತಿಯಲ್ಲಿ ತಯಾರು ಮಾಡೋಕ್ಕಾಗಲ್ಲ. ರಕ್ತವನ್ನು ಮಾನವನೇ ನೀಡಿ ಮತ್ತೊಬ್ಬರ ಜೀವನವನ್ನು ಉಳಿಸಿಕೊಳ್ಳಬೇಕಾಗುತ್ತೆ. ಪ್ರಸ್ತುತ ಎದುರಿಸುತ್ತಿರುವ ಈ ಕೊರೋನಾ ಕಾಲಘಟ್ಟದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಇದೆ. ವ್ಯಾಕ್ಸಿನ್ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ ರಕ್ತದಾನದ ಕೊರತೆಯನ್ನು ನೀಗಿಸಿಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ರೋಟರಿ ಕ್ಲಬ್‍ನ ಅಧ್ಯಕ್ಷರಾದ ಪ್ರೊ|ಝೇವಿಯರ್ ಡಿ'ಸೋಜರವರು ಮಾತನಾಡಿ, ಈ ಕೋವಿಡ್ ಸಂದರ್ಭದಲ್ಲಿ ನಮಗೆ ಎಲ್ಲಿಯೂ ಬಹಿರಂಗವಾಗಿ ಸಭೆ ಮಾಡಿ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಬ್ಲಡ್‍ಬ್ಯಾಂಕಿನಲ್ಲಿ ರಕ್ತದ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಈ ಬಾರಿ ಅತ್ಯಂತ ಹೆಚ್ಚು ಅಂದರೆ 50 ಯೂನಿಟ್ ರಕ್ತವನ್ನು ನೀಡಿರುವುದು ಇತಿಹಾಸವಾದರೂ, ನಮಗೆ ಈ ಸಂದರ್ಭದಲ್ಲಿ ಸಂಗ್ರಹಿಸಿದ್ದು ಕೇವಲ 18 ಯೂನಿಟ್ ಮಾತ್ರ ಆಗಿದೆ. ರಕ್ತವನ್ನು ಪ್ಲಾಸ್ಮಾ, ಪ್ಲೇಟ್‍ಲೆಟ್, ಪ್ಯಾಕ್‍ಡ್‍ಸೆಲ್ ಹೀಗೆ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಯಾವ ರೋಗಿಗೆ ಯಾವ ವಿಧದ ರಕ್ತ ಬೇಕಿದೆಯೋ ಅದನ್ನು ನಮ್ಮ ಬ್ಲಡ್‍ಬ್ಯಾಂಕ್ ಪೂರೈಸುತ್ತಾ ಬಂದಿದೆ. ಪ್ರಸ್ತುತ ದಿನಗಳಲ್ಲಿ ನಾವು ರಕ್ತದ ಕೊರತೆಯನ್ನು ಅನುಭವಿಸುತ್ತಿದ್ದು, ರಕ್ತದಾನಿಗಳು ಸೇವಾ ಮನೋಭಾವದೊಂದಿಗೆ ರಕ್ತದಾನ ಮಾಡಲು ಮುಂದೆ ಬರಬೇಕಾಗಿದೆ ಎಂದರು.

ಡೊನ್ ಬೊಸ್ಕೊ ಕ್ಲಬ್‍ನ ಅಧ್ಯಕ್ಷರಾದ ಅರುಣ್ ರೆಬೆಲ್ಲೊರವರು ಅಧ್ಯಕ್ಷತೆ ವಹಿಸಿದ್ದರು. ಮಾಯಿದೆ ದೇವುಸ್ ಚರ್ಚ್‍ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಪುತ್ತೂರು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಚೇರ್‍ಮ್ಯಾನ್ ಆಸ್ಕರ್ ಆನಂದ್, ಪುತ್ತೂರು ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಮಧು ನರಿಯೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡೊನ್ ಬೊಸ್ಕೊ ಕ್ಲಬ್ ಕಾರ್ಯದರ್ಶಿ ಕ್ಲೆಮೆಂಟ್ ಪಿಂಟೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

1 ದಿನದ ಕಾರ್ಯಕ್ರಮವಲ್ಲ, ಇದು ನಿರಂತರ...

ಪ್ರಸ್ತುತ ದಿನಗಳಲ್ಲಿ ಓರ್ವ ಹೆಂಗಸು ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಗೆ ಸೂಕ್ತ ಸಮಯದಲ್ಲಿ ಪುತ್ತೂರಿನ ಬ್ಲಡ್‍ಬ್ಯಾಂಕಿನ ಮುಖಾಂತರ ರಕ್ತದ ಅವಶ್ಯಕತೆಯನ್ನು ಪೂರೈಸಲು ಪುತ್ತೂರು ರೋಟರಿ ಕ್ಲಬ್‍ನ ಅಧ್ಯಕ್ಷ ಪ್ರೊ|ಝೇವಿಯರ್ ಡಿ'ಸೋಜರವರು ಮಹತ್ವದ ಪಾತ್ರ ವಹಿಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಬ್ಲಡ್‍ಬ್ಯಾಂಕಿನಲ್ಲಿ ಅವಶ್ಯಕ ರಕ್ತದ ಕೊರತೆ ಇದೆ ಎಂದು ಮನಗಂಡಾಗ ಡೊನ್ ಬೊಸ್ಕೊ ಕ್ಲಬ್‍ನ ಅಧ್ಯಕ್ಷ ಅರುಣ್ ರೆಬೆಲ್ಲೊ ಹಾಗೂ ನಿಯೋಜಿತ ಅಧ್ಯಕ್ಷ ಫೆಬಿಯನ್ ಗೋವಿಯಸ್‍ರವರು ಕೂಡಲೇ ಕಾರ್ಯಪ್ರವೃತ್ತರಾಗಿ ದಿನಕ್ಕೆ ಕನಿಷ್ಟ ಹತ್ತು ಮಂದಿಯಿಂದ ರಕ್ತದಾನ ಮಾಡಿಸುತ್ತೇವೆ ಎಂದು ಮುಂದೆ ಬಂದಿರೋದು ಉತ್ತಮ ವಿಷಯ. ಮಾಯಿದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರು ಈ ರಕ್ತದಾನ ಶಿಬಿರದಲ್ಲಿ ಖುದ್ದಾಗಿ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಮಾತ್ರವಲ್ಲದೆ ಮಹಿಳೆಯರು, ವಿವಿಧ ಜಾತಿ-ಧರ್ಮದವರು ಕೂಡ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ 45 ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದು ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಇದು ನಿರಂತರವಾಗಿ ನಡೆಯಲಿದೆ.

-ಕ್ಲೆಮೆಂಟ್ ಪಿಂಟೊ, ಕಾರ್ಯದರ್ಶಿ, ಡೊನ್ ಬೊಸ್ಕೊ ಕ್ಲಬ್

Comments powered by CComment

Copyright © 2013 - www.putturchurch.com. Powered by eCreators

Home | NewsSitemap | Contact

MAI DE DEUS CHURCH
Main Road, Puttur  P.O. - 574 201
Puttur Taluk, D.K. District

TEL: 08251-234570 / 230570

Mobile : 9880482474
E-Mail: [email protected]